ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಸೇರಿದ ಟ್ರಸ್ಟ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿಯಮಬಾಹಿರವಾಗಿ ನಿವೇಶನ ಹಂಚಿಕೆ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಖಾಸಗಿ ದೂರನ್ನು ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
ಖಾಸಗಿ ದೂರಿನೊಂದಿಗೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ (ಅಫಿಡವಿಟ್) ಲೋಪದೋಷಗಳಿದ್ದರೂ, ಅದು ಸರಿಪಡಿಸಬಹುದಾದಂತಹ ದೋಷವೇ (curable defect) ಹೊರತು, ಅದನ್ನು ನೆಪವಾಗಿಟ್ಟುಕೊಂಡು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 175 ರ ಅಡಿಯಲ್ಲಿ ನಿಗದಿತ ಶಾಸನಬದ್ಧ ಪ್ರಕ್ರಿಯೆಯನ್ನು ಕೈಬಿಟ್ಟು ನೇರವಾಗಿ ಸೆಕ್ಷನ್ 223 BNSS ಅಡಿಯಲ್ಲಿ ದೂರಿನ ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ.
